ಬರ್ಮೀ ಸಾಹಿತ್ಯ

	ಬರ್ಮೀಭಾಷೆಯಲ್ಲಿ ದೊರೆಯುವ ಶಿಲಾಶಾಸನ ಸಾಹಿತ್ಯವೆಂದರೆ ಕಲ್ಲಿನಲ್ಲಿ ಕೊರೆದ ಶಾಸನಗಳು. ಮೊತ್ತಮೊದಲ ಶಿಲಾಶಾಸನ ಕ್ರಿ.ಶ. 1113ರಲ್ಲಿ ಮ್ಯಾಜೆದಿ ಎಂಬಲ್ಲಿ ದೊರೆತಿದೆ. ಇದರಲ್ಲಿ ಬರ್ಮದ ರಾಜ ಕುಮಾರ ಬುದ್ಧನ ಚಿನ್ನದ ವಿಗ್ರಹ ಅರ್ಪಿಸಿದ ಮತ್ತು ಅದನ್ನು ಪಗೋಡ ಎಂಬ ಗುಹೆಯಲ್ಲಿ ಪ್ರತಿಷ್ಠಾಪಿಸಿದ್ದು ಮುಂತಾದ ವಿಷಯಗಳಿವೆ. ಶಾಸನದ ಕೊನೆಯ ಭಾಗದಲ್ಲಿ ಒಂದು ಪ್ರಾರ್ಥನೆ ಇದ್ದು ಆ ಮೂರ್ತಿಯನ್ನು ರಕ್ಷಿಸಿಕೊಂಡು ಬರುವವರಿಗೆ ಯಶಸ್ಸು, ನಾಶಗೊಳಿಸುವವರಿಗೆ ಹಾನಿಯೂ ಪ್ರಾಪ್ತವಾಗುತ್ತವೆ ಎಂಬ ವಿಷಯವಿದೆ. ಈ ಶಿಲಾಶಾಸನವನ್ನು ಬಹುಶ: ಅಲ್ಲಿಯ ಆಸ್ಥಾನ ಪಂಡಿತನೊಬ್ಬ ಪ್ರಾಚೀನ ಬರ್ಮೀ ಭಾಷೆಯಲ್ಲಿ ರಚಿಸಿ ಕಲ್ಲಿನಲ್ಲಿ ಕೆತ್ತಿಸಿರಬೇಕೆಂದು ಊಹೆ, ಇದಾದ 250 ವರ್ಷಗಳಲ್ಲಿ ಸುಮಾರು 500 ಶಿಲಾಶಾಸನಗಳು ದೊರಕಿವೆ. ಪ್ರಾಚೀನ ಬರ್ಮೀ ಸಾಹಿತ್ಯದಲ್ಲಿ ಹೆಚ್ಚಾಗಿ ಬುದ್ಧನ ಜಾತಕ ಥೆಗಳು ಕಂಡುಬರುತ್ತವೆ.

	14ನೆಯ ಶತಮಾನದ ಸುಮಾರಿಗೆ ಕಾಲ್ಪನಿಕ ಸಾಹಿತ್ಯವನ್ನು ತಾಳೆಗರಿಯಲ್ಲಿ ಬರೆದು ಕಾಗದದ ಹಾಗೆ ಮಡಚಿ ಇಡುವ ಪದ್ಧತಿ ಬೌದ್ಧರ ಪ್ರಾಬಲ್ಯದಲ್ಲಿ ಬೆಳೆದು ಬಂದಿತು. ಮುದ್ರಣ ಸೌಲಭ್ಯ ಅಸ್ತಿತ್ವದಲ್ಲಿ ಬರುವತನಕವೂ ಈ ತರಹದ ಬರೆವಣಿಗೆ ನಡೆಯಿತು. ಈ ಬಗೆಯ ಸಾಹಿತ್ಯ ಮುಖ್ಯವಾಗಿ ಬೌದ್ಧಭಿಕ್ಷುಗಳಿಂದ ರಚಿತವಾಗಿದೆ.

	ಬರ್ಮೀ ಸಾಹಿತ್ಯದಲ್ಲಿ ಜನಪದ ಲಾವಣಿಗಳು ತೊಟ್ಟಿಲ ಹಾಡುಗಳ ರೂಪದಲ್ಲಿ ಬಳಕೆಯಲ್ಲಿವೆ. ರಾಜಮನೆತನದ ವೀರರ ಕಥೆಗಳನ್ನು ಅಲ್ಲಿಯ ರಾಜಕುಮಾರ ಮತ್ತು ರಾಜಕುಮಾರಿಯರಿಗೆ ಹಾಡಿನ ರೂಪದಲ್ಲಿ ತಿಳಿಸಿ ಕೊಡಲಾಗುತ್ತಿತ್ತು. ಇಂಥ ಸಾಹಿತ್ಯದಲ್ಲಿ ಮೊತ್ತಮೊದಲನೆಯದು ಯಾ-ಖಾಯಿಂಗ್‍ಮಿನ್-ಧಾ-ಮಿ (ಅರಕನ್ ರಾಜಕುಮಾರಿ) ಇದನ್ನು ಕ್ರಿ.ಶ. 1455ರಲ್ಲಿ ಅದು-ನ್ಯೊ ಎಂಬ ಒಬ್ಬ ಅಸ್ಥಾನ ಮಂತ್ರಿ ಬರೆದಿದ್ದಾನೆಂದು ತಿಳಿದು ಬಂದಿದೆ. ಇದಲ್ಲದೆ 1618ರಲ್ಲಿ ಷಿನ್ ಧಾನ್ ಖೊ ಎಂಬಾತ ಮಿನ್-ರೆ-ಡೈಪ್-ಪಾ ಮಿನ್-ಥಾ-ಈಗ್ವಿನ್ ಎಂಬ ಕೃತಿಯನ್ನು, 1774ರಲ್ಲಿ ಉ-ಹ ಪ್ಯಾವ್ ಎಂಬಾತ ಸಿನ್-ಗುಮಿನ್-ಧಾ ಈ-ಗ್ವಿನ್ ಎಂಬ ಕೃತಿಯನ್ನು ರಚಿಸಿದ್ದಾರೆ. ಇವು ಬಹಳ ಮುಖ್ಯವಾದವು. 1886ರಲ್ಲಿ ಬರ್ಮೀ ಸಾರ್ವಭೌಮತ್ವ ಕೊನೆಗೊಂಡಾಗ ಈ ಸಾಹಿತ್ಯವೂ ಕೊನೆಗೊಂಡಿತು. ಇದು ಈ-ಗ್ಯುನ್ ಎಂಬ ಪದ್ಯಪ್ರಕಾರಕ್ಕೆ ಸೇರಿದೆ.

	ಇದೇ ಕಾಲದಲ್ಲಿ ಮಾವ್-ಗುನ್ ಎಂಬ ಪ್ರಕಾರದ ಪದ್ಯ ಸಾಹಿತ್ಯವೂ ಬೆಳೆಯಿತು. ಈ ಪದ್ಯಗಳಲ್ಲಿ ಆನೆ ಆಸ್ಥಾನಕ್ಕೆ ಬರುವ ವಿಷಯದಿಂದ ಮೊದಲಾಗಿ ನದಿ, ಆಕಾಶ ವರ್ಣನೆಯವರೆಗೂ ವಿಷಯ ಉಂಟು. ಇವುಗಳ ಪೈಕಿ 1472ರಲ್ಲಿ ಷಿನ್ ಹತ್ವೆ ನ್ಯೊ ಎಂಬಾತ ಬರೆದ ಪೈ-ಸನ್, 1480ರಲ್ಲಿ ಬೌದ್ಧ ಭಿಕ್ಷು-ರಾ-ಹ್ತ-ಧಾ-ರಾ ಎಂಬುವನು ಬರೆದ ತಾ-ದಾ-ಉ-ತಿಮಿನ್-ಗಾ-ಲಾ ಚೇ-ತಿ ಮುಖ್ಯವಾದವು. ಪ್ಯೋ, ಲಿನ್-ಗಾ, ಯ-ದು ಮುಂತಾದ ಪದ್ಯಪ್ರಧಾನವಾದ ಸಾಹಿತ್ಯವೂ ಬೆಳೆಯಿತು.

	ಉಸಾ (1766-1853) ಎಂಬ ಮಂತ್ರಿಯಿಂದ ನಾಟಕ ಸಾಹಿತ್ಯ ಪ್ರಾರಂಭವಾಯಿತು. ಇವನು ಏ-ನೌಂಗ್ ಎಂಬ ಸೈಮೀಸ್ ನಾಟಕವನ್ನು ಬರ್ಮೀ ಭಾಷೆಯಲ್ಲಿ ಅನುವಾದಿಸಿದ. ಮುಂದೆ ಎದ್-ಧಾ ಎಂಬಾತ ಗದ್ಯಪದ್ಯ ಮಿಶ್ರಣದಲ್ಲಿ ನಾಟಕ ಬರೆದ. ಇದನ್ನು ರಾಜನ ಆಸ್ಥಾನದಲ್ಲಿ ಆಡಿ ತೋರಿಸುತ್ತಿದ್ದರು. ಕ್ಕಿನ್ ಉ (1819-53) ಮತ್ತು ಪೋನ್ ನ್ಯಾ ಎಂಬುವರು ಅನೇಕ ಪ್ಯಾಜತ್ (ರಂಗನಾಟಕ) ಬರೆದರು.

	ಮುದ್ರಣ ಆರಂಭವಾದ ತರುವಾಯ ಬರ್ಮೀ ಸಾಹಿತ್ಯದಲ್ಲಿ ಪರಿವರ್ತನೆಗಳಾದುವು. 1875ರಿಂದ ಮುದ್ರಣಾಲಯದ ಮಾಲೀಕರು ಅನೇಕ ಉತ್ತಮ ಕೃತಿಗಳನ್ನು ಮುದ್ರಿಸಲು ತೊಡಗಿದರು. ಇವುಗಳಲ್ಲಿ ಪ್ಯಾಜತ್ ಒಂದು.

	1904ರಲ್ಲಿ ಕಾದಂಬರಿ ಸಾಹಿತ್ಯ ಹೊರಬಂದಿತು. ಜೇಮ್ಸ್ ಹ್ಲ್ಯಾಗ್ಯಾವ್ ಎಂಬಾತ ಕೌಂಟ್ ಆಫ್ ಮಾಂಟೆಕ್ರಿಸ್ಟೋ ಎಂಬ ಕೃತಿಯನ್ನು ಅನುವಾದಿಸಿ ಮೌಂಗ್‍ಯನ್ ಮೌಂಗ್ ಮಾ ಮೆ ಮಾ ಎಂಬ ಶೀರ್ಷಿಕೆ ಕೊಟ್ಟ. ಇದಾದನಂತರ ಅನೇಕ ಕಾದಂಬರಿಗಳು ಪ್ರಕಟಗೊಂಡವು.

	1920ರಲ್ಲಿ ರಂಗೂನ್ ವಿಶ್ವವಿದ್ಯಾಲಯದ ಸ್ಥಾಪನೆಯಿಂದ ಬರ್ಮೀ ಸಾಹಿತ್ಯಕ್ಕೆ ಹೊಸ ಆಯಾಮ ಚಿಗುರಿತು. ಸಣ್ಣಕಥೆಗಳು, ಪ್ರಬಂಧಗಳು ಹೊರಬಂದುವು.

	1948ರಲ್ಲಿ ಬರ್ಮ ಸ್ವತಂತ್ರ ಗಣರಾಜ್ಯವಾದ ಬಳಿಕ ರಾಷ್ಟ್ರೀಯ ಸಂಸ್ಕøತಿ ರೂಪುಗೊಳ್ಳತೊಡಗಿತು. ಈ ವೇಳೆ ಕಾದಂಬರಿ, ಲೇಖನ ಮತ್ತು ಅನುವಾದಗಳಿಗೆ ಮಹತ್ತ್ವ ಕೊಡಲಾಯಿತು. ಬರ್ಮೀ ಸಾಹಿತ್ಯದ ಪ್ರಥಮ ಸ್ವತಂತ್ರ ಕಾದಂಬರಿ ಮಿನ್-ಅಂಗ್ ಅವರ ಮೊ-ಔಕ್ ಮೈ-ಹಿನ್ (ಅಕಾಶದ ಕೆಳಗೆ ಭೂಮಿ) 1948ರಲ್ಲಿ ಈ ಕೃತಿಗೆ ಪ್ರಥಮ ಬಹುಮಾನ ದೊರೆಯಿತು.

	ಆಧುನಿಕ ಬರ್ಮೀ ಸಾಹಿತ್ಯದಲ್ಲಿ ಯೊಕ್-ಪೊನ್-ಹ್ಲಾ, ದಾ-ಗನ್‍ತಾ-ಯಾ (1955) ಮತ್ತು ಮೌಂಗ್ ಹ್ಮಾಯಿಂಗ್, ಧೆಯಿನ್ ಹಾನ್ (1956) ಬರೆದ ಸಾಹಿತ್ಯ ಚರಿತ್ರೆಗಳು ಮುಖ್ಯವಾದವು. ಇವುಗಳಲ್ಲಿ ಬರ್ಮೀ ಸಾಹಿತ್ಯದ ಮುಖ್ಯ ಸಾಹಿತಿ ಮತ್ತು ಕವಿಗಳ ಜೀವನ ಚಿತ್ರಣವಿದೇ.
(ಕೆ.ಪಿ.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ